ಮೈಸೂರು: ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯದ ಜೊತೆಗೆ ಮೂಲಭೂತ ಹಕ್ಕು ಕೂಡ ಆಗಿದೆ ಎಂದು ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಟ್ವೆಲ್ ಮೀಡಿಯಾ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಶೀರೋ ಅವಾಡ್ಸ್ ೯ನ ಲಾಂಛನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದರು ಸಹ ಬಳಕೆ ಕಡಿಮೆಯಾಗುತ್ತಿಲ್ಲ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಅಲ್ಲದೇ ರೋಗಗಳಿಗೆ ಆಹ್ವಾನದಂತಿದೆ ಎಂದು ಹೇಳಿದರು.
ಮೈಸೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ಅನೇಕ ಹೆದ್ದಾರಿಗಳಲ್ಲಿ ಹೋಗುವಾಗ ರಸ್ತೆಯ ಬದಿಗಳಲ್ಲಿ ಮರಗಳಿಂದ ವಾತಾವರಣ ಸುಂದರವಾಗಿ ಕಾಣುತ್ತಿತ್ತು.ಆದರೆ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಪರಿಸರದಿಂದ ಮನುಷ್ಯನಿಗೆ ಸಾಕಷ್ಟು ಕೊಡುಗೆ ಸಿಕ್ಕಿದೆ.ಅದರಿಂದ ಹೆಚ್ಚಾಗಿ ಉಪಯೋಗ ಪಡೆಯುತ್ತಿರುವ ನಾವು,ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿದ್ದೇವೆ.ಅಭಿವೃದ್ಧಿ ಎಂದರೆ ಪರಿಸರ ನಾಶ ಮಾಡಿ ಅಭಿವೃದ್ಧಿ ಮಾಡುವುದಲ್ಲ.ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಮನುಷ್ಯನಿಗೆ ಶಿಕ್ಷಣ ಎಷ್ಟು ಅಗತ್ಯವೋ,ಅಷ್ಟೆ ಪರಿಸರವು ಅಗತ್ಯ ವಾಗಿದೆ. ಪರಿಸರವಿದ್ದರೆ ನಾವಿಲ್ಲ ಎಂಬುವುದನ್ನ ಯಾರು ಮರೆಯಬಾರದು ಎಂದು ಹೇಳಿದರು.
ಯದುವೀರ್ ಅವರೊಂದಿಗೆ ಶಿಕ್ಷಣ ಮತ್ತು ಪರಿಸರ ಕುರಿತು ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಟ್ವೆಲ್ ಮೀಡಿಯಾ ಸಂಸ್ಥೆಯ ದೀಪಕ್ ಟಾಟೇರ್ ಜೈನ್, ಕಾರ್ಯಕಾರಿ ನಿರ್ದೇಶಕರಾದ ಸಿಂಧೂ ಮಂಗಳವೇದ ಇತರರು.