ಸಿಎಂ ಆಗಿ ಸಿದ್ದು ಮುಂದುವರಿಯುತ್ತಾರೆ :ಮಹೇವಪ್ಪ

ManjuHamapura
0
ಮೈಸೂರು: ಆಸೆ ಇಲ್ಲದ ಮನುಷ್ಯ ಬುದ್ಧನಾಗುತ್ತಾನೆ. ನಾನು ಬುದ್ಧ ಆಗಿಲ್ಲ, ಬುದ್ಧನನ್ನು ಅನುಸರಿಸುತ್ತಿದ್ದೇನೆ ಎಂದು  ದಲಿತ ಮುಖ್ಯಮಂತ್ರಿ ವಿಚಾರದ ಕುರಿತು   ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪರೋಕ್ಷವಾಗಿ ಮುಖ್ಯಮಂತ್ರಿಯಾಗುವ ಆಸೆಯನ್ನು ಬಿಚ್ಚಿಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಲಿತ ಮುಖ್ಯಮಂತ್ರಿ ಆಗಲು ನಾನು, ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ ಅರ್ಹರಾಗಿದ್ದೇವೆ ಎಂಬ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪರಮೇಶ್ವರ್ ಅವರು ಹೇಳಿರೋದರಲ್ಲಿ ತಪ್ಪಿಲ್ಲ, ಈ ಹಿಂದೆಯೂ ಕೂಡ, ಬಸವಲಿಂಗಪ್ಪ, ಕೆ.ಎಚ್.ರ.ಗನಾಥ್ ಸೇರಿದಂತೆ ಅನೇಕ ದಲಿತನಾಯಕರು ಸಿಎಂ ಸ್ಥಾನದ ರೇಸ್ ನಲ್ಲಿದ್ದರು. ಅವರಿಗೂ ಅವಕಾಶ ಸಿಗಲಿಲ್ಲ, ಈಗ ನಾನು, ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಇದ್ದೇವೆ. ಆಸೆ ಇಲ್ಲದ ಮನುಷ್ಯ ಬುದ್ಧನಾಗುತ್ತಾನೆ. ನಾನು ಬುದ್ಧ ಅಲ್ಲ, ಬುದ್ಧನನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿದರು.

ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಆಡಳಿತವನ್ನು ನೀಡುತ್ತಿದ್ದೇವೆ. ನಾವು ಯಾವುದೇ ಧರ್ಮ, ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಆಡಳಿತ ನಡೆಸುವುದಿಲ್ಲ, ಸಂವಿಧಾನದ ಪ್ರಕಾರ ಎಲ್ಲರನ್ನೂ ಒಳಗೊಂಡು ಆಡಳಿತ ನೀಡುತ್ತೇವೆ. ಹಾಗಾಗಿಯೇ ಸಂವಿಧಾನ ವಿರೋಧಿಯಾದ ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆದಿರುವುದು ಎಂದು ಸ್ಪಷ್ಟಪಡಿಸಿದರು.

ಗೋವುಗಳನ್ನು ಸಾಕದೆ ಇರುವವರು ಗಂಜಲ ಎತ್ತದೆ ಇರುವವರು  ಗೋವುಗಳನ್ನು ಸೋಪ್ ಹಾಕಿ ತೊಳೆದುಕೊಂಡು ಬಂದು ಫೋಟೋ ತೆಗೆಸಿಕೊಂಡು ನಾವುಗಳೇ ಗೊ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಸುಗಳ ಮಧ್ಯೆಯೇ ಬೆಳೆದು ಬಂದವರು. ಹಸುಗಳಿಗೆ ವಯಸ್ಸಾದ ಮೇಲೆ ಅವುಗಳನ್ನು ಸಾಕಲು ಸಾಧ್ಯವಿಲ್ಲ, ಹಾಗಾಗಿಯೇ 1964 ರಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಉಪಯೋಗಕ್ಕೆ ಬಾರದ ಹಸುಗಳನ್ನು  ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಬಲವಂತದ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲೇ ಇದೆ.  ಮತ್ತೆ ಮತಾಂತರ ನಿಷೇಧ ಕಾನೂನು ಅಪ್ರಸ್ತುತ. ಹಾಗಾಗಿಯೇ ನಾವು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲಾಯಿತು ಎಂದು ಸಮರ್ಥಿಸಿಕೊಂಡರು.

ಪಠ್ಯಪುಸ್ತಕ ವಿಚಾರದಲ್ಲಿ ಬಿಜೆಪಿಯವರು ಇತಿಹಾಸಕಾರರಲ್ಲದವರನ್ನು ಇತಿಹಾಸ ಕಾರರು ಎಂದು ಬಿಂಬಿಸಿ ಚರಿತ್ರೆಯನ್ನು ಬದಲಾಯಿಸಲು ಹೊರಟಿದ್ದರು. ಹಾಗಾಗಿ ಮಕ್ಕಳು ನೈಜ ಇತಿಹಾಸ ಮತ್ತು ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದರು.


ಚುನಾವಣಾ ಪೂರ್ವಭರವಸೆಗಳು, ಗ್ಯಾರಂಟಿ ಯೋಜನೆಗಳು  ಸಂವಿಧಾನದ ಹಕ್ಕುಗಳಲ್ಲ. ಆದರೆ ನಾವು ಜನರಿಗೆ ಪ್ರೇರಣೆ ನೀಡುವಂತ ಘೋಷಣೆಗಳು. ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಈಡೇರಿಸುವುದು ನಮ್ಮ ಆದ್ಯ ಕರ್ತವ್ಯ ಹಾಗಾಗಿ ಮೊದಲಿಗೆ ನಾವು ಭರವಸೆ ಕೊಟ್ಟಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದ್ದೇವೆ. ಮೊದಲಿಗೆ ಮಹಿಳೆಯರಿಗೆ ಉಚಿತ ಬಸ್ ಸೇವೆಯಾದ  ಶಕ್ತಿಯೋಜನೆ ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ ಎಂದು ಹೇಳಿದರು.

ಉಚಿತ 10 ಕೆ.ಜಿ.ಅಕ್ಕಿ ಕೊಡುವ ಸಂಬಂಧ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ರಾಜಕೀಯ ಮಾಡುತ್ತಿದೆ. ಆದರೂ ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಿಯೇ ತೀರುತ್ತೇವೆ. ಈಗಾಗಲೆ ನಮ್ಮ ಸಚಿವರುಗಳು ಪಂಜಾಬ್, ತೆಲಂಗಾಣ ರಾಜ್ಯಗಳನ್ನು ಅಕ್ಕಿ ಖರೀದಿಗಾಗಿ ಸಂಪರ್ಕಿಸುತ್ತಿವೆ ಎಂದು ಹೇಳಿದರು.

ಹತ್ತು ಕೆ.ಜಿ.ಅಕ್ಕಿ ಕೊಡುತ್ತೆವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿ ಘೋಷಣೆ ಮಾಡಿದ್ದರಾ ಎಂಬ ಬಿಜೆಪಿ ಹೇಳಿಕೆ ಬುದ್ಧಿಹೀನರು ಹೇಳುವಂತದು. ಅವರಿಗೆ ನಿಜವಾಗಿಯೂ ಆಡಳಿತದ ಅರಿವೆ ಇಲ್ಲ, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆಗೆ ಧಕ್ಕೆ ಬರುತ್ತದೆ ಎನ್ನುವುದಾದರೆ. ಬಿಜೆಪಿ ಆಡಳಿತದ ವೇಳೆ ಆರ್ಥಿಕತೆ ಚೆನ್ನಾಗಿದ್ದರೆ ಏಕೆ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಸ್ಕಾಲಾರ್ ಶಿಪ್ ಕೊಡಲಿಲ್ಲ, ಶುಲ್ಕ ಕಟ್ಟಲು ಆಗದೆ ವಿದ್ಯಾರ್ಥಿಗಳು ಏಕೆ ಶಿಕ್ಣದಿಂದ ವಂಚಿತರಾದರು ಎಂದು ಪ್ರಶ್ನಿಸಿದರು.

ಐದು ವರ್ಷ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರ ಎಂಬ ಪ್ತಶ್ನೆಗೆ ಉತ್ತರಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸದ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಮುಂದುವರೆಯುತ್ತಿದ್ದಾರೆ ಅಷ್ಟೇ ಎಂದು ಜಾಣ್ಮೆಯ ಉತ್ತರ ನೀಡಿದರು.

ನಮಗೆ ಹೊಂದಾಣಿಕೆ ರಾಜಕಾರಣ ಎಂದರೆ ಏನು ಎಂಬುದೇ ಗೊತ್ತಿಲ್ಲ, ಸಿದ್ಧರಾಮಯ್ಯ ಅವರು ಅಧಿಕಾರಕ್ಕಾಗಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡವರೇ ಅಲ್ಲ, ವಿರೋಧ ಪಕ್ಷದವರ ಜೊತೆ ಎಂದೂ ಮಾತನಾಡಿದವರಲ್ಲ. ಹೊಂದಾಣಿಕೆ ಏನಾದರೂ ಇದ್ದರೆ ಅದು ಸಂಸದ ಪ್ರತಾಪ್ ಸಿಂಹ ಅವರದೇ ಎಂದು ತಿರುಗೇಟು ನೀಡಿದರು.

ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆ 2014 ರಲ್ಲಿ ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಸಚಿವರಾಗಿದ್ದು, ನಾನು ರಾಜ್ಯದಲ್ಲಿ ಲೊಕೋಪಯೋಗಿ ಸಚಿವರಾಗಿದ್ದ ವೇಳೆ ಜಾರಿಯಾಗಿದ್ದು, ಇದಕ್ಕೆ ದಾಖಲೆಗಳಿವೆ. ಅಭಿವೃದ್ದೀಯನ್ನೇ ಮಾಡದೆ ನಾವೆ ಮಾಡಿದ್ದು ಎಂದು ಹೇಳಿಕೊಳ್ಳುವ ಜಾಯಮಾನ ನಮಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕಯಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ, ಗ್ರಾಮಾಂತರ ಉಪಾಧ್ಯಕ್ಷ  ಧರ್ಮಾಪುರ ನಾರಾಯಣ,  ನಗರ ಉಪಾಧ್ಯಕ್ಷ ಅನುರಾಗ್ ಬಸವರಾಜು, ನಗರ ಉಪಾಧ್ಯಕ್ಷ ಅನುರಾಗ್ ಬಸವರಾಜು.


Post a Comment

0Comments
Post a Comment (0)