ಮೈಸೂರು: ನಿಮ್ಮ ಪ್ರಕಾರ ಪ್ರಬುದ್ಧತೆ ಎಂದರೆ ಏನು ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ನೀವು ಮಹಾಮೇದಾವಿ, ಅರ್ಥಶಾಸ್ತ್ರಜ್ಞ. ತಮ್ಮ ರಾಜಕೀಯ ಲಾಭಕ್ಕಾಗಿ ಸ್ವಪಕ್ಷೀಯರನ್ನೇ ಎತ್ತಿ ಕಟ್ಟಿ ಪರಮೇಶ್ವರ್ ಅವರನ್ನು ಸೋಲಿಸಿದ್ದಾ? ಮೊಮ್ಮಗನನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿರುವುದಾ? ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ ದೇವೇಗೌಡರನ್ನು ಏಕವಚನದಲ್ಲಿ ಕರೆಯುವುದಾ? ಹಿರಿಯರನ್ನು ತ್ಯುಚ್ಛವಾಗಿ ಕಾಣುವುದಾ? ಎಂದು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನರನ್ನು ಗ್ಯಾರಂಟಿಗಳ ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವುದಾ? ಇದೇ ಪ್ರಬುದ್ಧತೆ ಎನ್ನುವುದಾದರೆ ಇಂತಹ ಪ್ರಬುದ್ಧತೆ ನನಗೆ ಬೇಡ. ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲದೆ ಗ್ಯಾರಂಟಿಗಳನ್ನು ಘೋಷಿಸಿ ವಿಲ ವಿಲ ಒದ್ದಾಡುತ್ತಿದ್ದಾರೆ. ನಿಮ್ಮ ಪ್ರಕಾರವೇ ಗ್ಯಾರಂಟಿಗಳ ಜಾರಿಗೆ ವರ್ಷಕ್ಕೆ 59 ಸಾವಿರ ಕೋಟಿ ಬೇಕು. ಅದನ್ನು ಯಾವ ಮೂಲದಿಂದ ತರುತ್ತೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದು ಕೇಳಿದರು.
ಅಧಿಕಾರಕ್ಕೆ ತರುವ ಛಲವಿರಲಿಲ್ಲ: ಬಿಜೆಪಿ ಕಾರ್ಯಕತರಾದ ಪ್ರವೀಣ್ ನೆಟ್ಟಾರು, ಹರ್ಷನ ಹತ್ಯೆಯಾದಾಗ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಯಡಿಯೂರಪ್ಪ ಅವರಿಂದ ಅಧಿಕಾರ ವಹಿಸಿಕೊಂಡ ಅತಿರಥ ಮಹಾರಥರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿಲ್ಲ. ಅಧಿಕಾರಕ್ಕೆ ತರಲು ಛಲವೂ ಅವರಲ್ಲಿರಲಿಲ್ಲ. ಈ ನೋವು ಕಾರ್ಯಕರ್ತರಲ್ಲಿತ್ತು. ಕಾರ್ಯಕರ್ತರ ಮನಸ್ಸಿನ ನೋವನ್ನು ನಾನು ಹೇಳಿದ್ದೇನೆ. ನನಗೆ ಯಾವ ಅಧಿಕಾರದ ಆಸೆಯೂ ಇಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರಿಗೇ ಟಾಂಗ್ ಕೊಟ್ಟರು.
ಉಪಕಾರ ಸ್ಮರಣೆ ಇಲ್ಲ: ಸಿದ್ದರಾಮಯ್ಯ ಅವರಿಗೆ ಉಪಕಾರ ಸ್ಮರಣೆ ಇಲ್ಲ. ಅವರನ್ನು ರಾಜಕಾರಣಕ್ಕೆ ಕರೆತಂದಿದ್ದು ಕೆಂಪೀರೇಗೌಡರು. ಅಧಿಕಾರ ಕೊಟ್ಟವರು ದೇವೇಗೌಡರು. ಆದರೂ ಅವರ ಹೆಸರನ್ನು ಸಿದ್ದರಾಮಯ್ಯ ಎಲ್ಲಿಯೂ ಹೇಳುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ವರುಣಾದಲ್ಲಿ ನೀವು ಯಾರಿಗೆ ಕರೆ ಮಾಡಿದಿರಿ? ನಟ ಸುದೀಪ್ ಪ್ರಚಾರಕ್ಕೆ ಬರದಂತೆ ಹೇಗೆ ತಡೆದಿರಿ? ನಿಮ್ಮ ವಿರುದ್ಧ ತೀಕ್ಷ್ಣ ಹೇಳಿಕೆ ನೀಡದಂತೆ ಹೇಗೆ ನೋಡಿಕೊಂಡಿರಿ ಎಂಬುದನ್ನಾದರೂ ಸ್ಮರಿಸಿಕೊಳ್ಳಿ. ನಂತರ ಬಿಜೆಪಿಯಲ್ಲಿ ನಿಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಯಾರು ಎನ್ನುವುದನ್ನು ಬಹಿರಂಗಪಡಿಸುತ್ತೇನೆ ಎಂದರು.