ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆ ಯಜಮಾನಿಯ ಖಾತೆಗೆ ತಿಂಗಳಿಗೆ ₹ 2000 ಹಣ ನೀಡವುದಾಗಿ ಭರವಸೆ ನೀಡಿದ್ದು, ಅದರಂತೆ ಈ ಯೋಜನೆಗೆ ಜುಲೈ.14ರಿಂದ ಚಾಲನೆ ಆರಂಭಗೊಳ್ಳಲಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಜು.14 ರಂದು ಚಾಲನೆ ನೀಡಲು ಬಹುತೇಕ ಖಚಿತವಾಗಿದೆ.ಅಲ್ಲದೇ, ಚಂದಾಪುರ ಒಳಚರಂಡಿ ಯೋಜನೆಗೆ 106 ಕೋಟಿ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯಡಿ ಕಾಮಗಾರಿಗಳ ಪೂರ್ಣಗೊಳಿಸಲು ಸಮಯ ವಿಸ್ತರಣೆ ಮಾಡಲಾಗುತ್ತಿದೆ. 920 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಎಸ್ಸಿ,ಎಸ್ಟಿ ಗುತ್ತಿಗೆದಾರರಿಗೆ ಟೆಂಡರ್ ಮಿತಿ ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 50 ಲಕ್ಷದಿಂದ 1 ಕೋಟಿಗೆ ಎಸ್ಸಿ, ಎಸ್ಟಿ ಗುತ್ತಿಗೆದಾರರ ಟೆಂಡರ್ ಮಿತಿಯನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ರಸ್ತೆ ಸುರಕ್ಷತಾ ಕಾಯ್ದೆಗೆ ತಿದ್ದುಪಡಿಗೆ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ ಎಂದರು.
ಅಲ್ಲದೇ, ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ವಿಚಾರವಾಗಿ ಮಾತನಾಡಿ, ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡ್ತೇವೆ ಎಂದರು.