ಮೈಸೂರು: ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಿಂದ ನಗರದಲ್ಲಿ ಮೇ 20 ಮತ್ತು 21ರಂದು ‘ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ–10’ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಹಾಗೂ ಜೆಎಸ್ಎಸ್‌ನ ಎಸ್‌ಜೆಸಿಇ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ನಗರದ ನವೋದಯ ಕ್ರಿಕೆಟ್ ಕ್ಲಬ್ ಮತ್ತು ಜೈ ಹಿಂದ್ ಕ್ರಿಕೆಟ್ ಕ್ಲಬ್ ಸಹಯೋಗ ನೀಡಲಿವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ತಿಳಿಸಿದರು.
ರಣಜಿ ಟ್ರೋಫಿ, ರಾಜ್ಯ ತಂಡ, ಮೈಸೂರು ವಿಭಾಗ ಹಾಗೂ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ್ದ 40 ವರ್ಷ ವಯೋಮಾನ ದಾಟಿದ ನೂರಕ್ಕೂ ಹೆಚ್ಚು ಹಿರಿಯ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ನಗರದಿಂದ ಮೂರು ತಂಡಗಳು, ಬೆಂಗಳೂರು, ಶಿವಮೊಗ್ಗ ಮತ್ತು ತುಮಕೂರಿನಿಂದ ತಲಾ ಒಂದು ತಂಡಗಳು ಆಗಮಿಸಲಿವೆ. ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯ ನಡೆಯಲಿದೆ’ ಎಂದರು.
ಮೇ 20ರಂದು ಬೆಳಿಗ್ಗೆ 8ಕ್ಕೆ ಒಡೆಯರ್ ಕ್ರೀಡಾಂಗಣದಲ್ಲಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಸೇಪಿಯಂಟ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ದಲ್ಜೀತ್ ರಾಮ್, ಕೆಎಸ್‌ಸಿಎ ಮೈಸೂರು ಸಂಚಾಲಕ ಆರ್.ಕೆ.ಹರಿಕೃಷ್ಣ ಭಾಗಿಯಾಗಲಿದ್ದಾರೆ. ಮೇ 21ರಂದು ಸಂಜೆ 4ಕ್ಕೆ ಬಹುಮಾನ ವಿತರಣೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಪ್ರೀಮಿಯರ್ ಲೀಗ್ ಸಂಘಟನಾ ಸಮಿತಿಯ ಸದಸ್ಯರಾದ ಡಾ.ಮನ್ಸೂರ್ ಅಹ್ಮದ್, ಎಂ.ಆರ್.ಆನಂದ, ಎ.ಸುಧೀಂದ್ರ ಇದ್ದರು.