ಮೈಸೂರು:ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಎಸ್ ಯೋಗೀಶ ಉಪ್ಪಾರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ 25ರಿಂದ 30 ಲಕ್ಷ ಮತದಾರರಿರುವ ಉಪ್ಪಾರ ಸಮುದಾಯವು ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಸಮಾಜದ ಏಕೈಕ ಶಾಸಕರಾಗಿ ಪುಟ್ಟರಂಗಶೆಟ್ಟಿ ಆಯ್ಕೆಯಾಗಿದ್ದು, ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಉಪ್ಪಾರ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡಲಿಲ್ಲ, ನಾವೆಲ್ಲರೂ ಒಮ್ಮತದಿಂದ ಸಿದ್ದರಾಮಯ್ಯ ನೇತೃತ್ವ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ. ಸಮಾಜದ ಮುಂಚೂಣಿ ನಾಯಕರನ್ನು ಗುರುತಿಸಿ ವಿಧಾನಪರಿಷತ್ ಸದಸ್ಯ ಸ್ಥಾನ ಹಾಗೂ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನಗಳನ್ನು ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಕನಕನಗರ ಮಹದೇವು, ಉಪಾಧ್ಯಕ್ಷ ಕರಳಾಪುರ ನಾಗರಾಜು, ಗೌರವ ಸಲಹೆಗಾರ ಚಂದ್ರಪ್ಪ, ನಿರ್ದೇಶಕರಾದ ಕುಡ್ಲಾಪುರ ಎಂ.ರಾಜು, ಮಲ್ಲೇಶ್ ಹಾಗೂ ಮುಖಂಡ ಸೋಮಶಂಕರ್ ಇದ್ದರು.