ಮೈಸೂರು: ಅಲ್ಪಸಂಖ್ಯಾತರ ಮತಾಂಧತೆ ಅವರ ಧರ್ಮಕ್ಕೆ ಅಪಾಯಕಾರಿಯಾದರೇ, ಬಹುಸಂಖ್ಯಾತರ ಮತಾಂಧತೆ ದೇಶಕ್ಕೆ ಅಪಾಯಕಾರಿ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಗುರುವಾರ ನಗರದ ಚಾಮುಂಡಿ ಬೆಟ್ಟದ ಪಾದದ ಬಳಿ ರುದ್ರಭೂಮಿಯಲ್ಲಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಸಾಮರಸ್ಯಕ್ಕಾಗಿ ಸೌಹಾರ್ದ ಕೂಟ ಮತ್ತು ಸಹಪಂಕ್ತಿ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವರೊಬ್ಬ ನಾಮ ಹಲವು ಎಂಬುದು ಕೇವಲ ಭ್ರಮೆ ಅಷ್ಟೇ. ಈ ಕ್ರಮವೇ ಸರಿಯಿಲ್ಲ ಸರ್ವರನ್ನು ಸಮಾನರನ್ನಾಗಿ ಕಾಣುವಲ್ಲಿ ಧರ್ಮಗಳು ಹಿಂದೆ ಉಳಿದಿವೆ. ಧರ್ಮ ಮಾತ್ರ ದೇಶವನ್ನು ರಕ್ಷಿಸುತ್ತದೆ, ಐಕ್ಯತೆ ಸೃಷ್ಟಿಸುತ್ತದೆ ಎಂಬುದು ಸುಳ್ಳು ಎಂದು ಹೇಳಿದರು.
ಇತಿಹಾಸದಲ್ಲಿ ಅಶೋಕ, ಅಕ್ಬರ್ ಮುಂತಾದ ರಾಜರು ಸಾಮರಸ್ಯದ ಆಡಳಿತವನ್ನು ನೀಡಿದ್ದಾರೆ. ಇಂದು ಆ ಹಾದಿಯನ್ನು ತಪ್ಪಿದ್ದೇವೆ. ಧರ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಸಂಘರ್ಷ ಮಾನವೀಯತೆಗೆ ದೊಡ್ಡ ಕಂಟಕವಾಗಿದೆ.ನೆಲ, ಜಲ, ಭಾಷೆಯೂ ಐಕ್ಯತೆಗೆ ಸಹಕಾರಿ. ಮತಾಂಧತೆ ಮರೆತು ಸಂವಿಧಾನ ಮೌಲ್ಯಗಳನ್ನು ಅನುಸರಿಸೋಣ ಎಂದರು.
ಕೆ.ಎಸ್.ಶಿವರಾಮು ಮಾತನಾಡಿ ಮಾತನಾಡಿ, ನಾವೆಲ್ಲರೂ ದ್ರಾವಿಡರಾಗಿದ್ದು, ಹಿಂದೂ ಎಂಬ ಪದ ಶೋಷಣೆಗಾಗಿ ಬಳಸಲಾಗುತ್ತಿದೆ. ಕೋಮುವಾದ ಮತ್ತು ಜಾತೀಯತೆಯಿಂದ ಭಾರತ ನಲುಗುತ್ತಿದೆ. ಹಿಂದೂ ಹಿಂದೂ ಎನ್ನುತ್ತಾ ದೇಶದ ವಾತಾವರಣ ಕಲುಷಿತ ಮಾಡಲಾಗಿದೆ. ಸರ್ವರನ್ನು ಒಂದೇ ಎನ್ನುವ ಗುಣ ಮರೆಯಾಗಿದೆ ಎಂದರು.
ಕಳೆದ ಸರ್ಕಾರ ಹಲಾಲ್, ಹಿಜಾಬ್, ಆಜಾನ್ ಎನ್ನುತ್ತಾ ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡಿತ್ತು.ಇದರ ವಿರುದ್ಧ ಚುನಾವಣೆಯಲ್ಲಿ ಜನತೆ ಸರಿಯಾದ ತೀರ್ಪು ನೀಡಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ರಾಜ್ಯಕ್ಕೆ ಒಳಿತಿನ ಭರವಸೆ ಮೂಡಿಸಿದೆ ಎಂದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಆರ್.ಫ್ರಾಂಸಿಸ್,ಪ್ರೊ.ಕಾಳೇಚೆನ್ನೇಗೌಡ, ಪ್ರೊ.ಮೈಲಳ್ಳಿ ರೇವಣ್ಣ, ಕ್ರಿಶ್ಚಿಯನ್ ಮುಖಂಡರಾದ ಜೋಸೆಫ್ ಜಾಜಿ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಸಿ.ವೆಂಕಟೇಶ್, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಎನ್.ಆರ್.ನಾಗೇಶ್, ಚಿಂತಕ ಎಂ.ಎಫ್.ಕಲೀಂ, ಜಿಲ್ಲಾ ಉಪ್ಪಾರ ಸಂಘದ ಅಧರ್ಯಕ್ಷ ಯೋಗೇಶ್ ಉಪ್ಪಾರ್, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಫಿಕ್, ನಗರ ಕಾಂಗ್ರೆಸ್ ಎಸ್‌ಟಿ ಸೆಲ್ ಅಧ್ಯಕ್ಷ ರೋಹಿತ್, ಮುಖಂಡ ನಜರ್‌ಬಾದ್ ನಟರಾಜ್ ಇದ್ದರು.