ಅಕ್ಕಿ ಬದಲು ಖಾತೆಗೆ ಹಣ ಹಾಕುತ್ತೇವೆ: ಸಚಿವ ಮುನಿಯಪ್ಪ

ManjuHamapura
0
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸಲು ಸಮಸ್ಯೆ ಎದುರಾಗಿರುವ ರಾಜ್ಯ ಸರ್ಕಾರಕ್ಕೆ.ಅಕ್ಕಿ ಬದಲು ತಿಂಗಳಿಗೆ 170 ರೂ. ಹಣ ಹಾಕುವ ಕೆಲಸಕ್ಕೆ ಮುಂದಾಗಿದೆ.

ಈ ಸಂಬಂಧ, ತಿಂಗಳಿಗೆ  5 ಕೆಜಿ ಅಕ್ಕಿ ನೀಡುವುದರ ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಅದಕ್ಕೆ ತಗುಲುವ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ಇಂದು ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪ್ರತಿ ಕೆಜಿ ಅಕ್ಕಿಗೆ 34 ರೂಗಳಂತೆ ಪ್ರತಿ ವ್ಯಕ್ತಿಗೆ 170 ರೂ ಕೊಡಲಾಗುವುದು. ಹಣವನ್ನು ಬಿಪಿಎಲ್ ಕಾರ್ಡಿನಲ್ಲಿ ಮನೆಯ ಮುಖ್ಯಸ್ಥ ಎಂದು ನಮೂದಿಸಿದವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯಕ್ಕೆ 5ಕೆಜಿ ಅಕ್ಕಿ ನೀಡಲಾಗುತ್ತದೆ ಮತ್ತು ಉಳಿದುದ್ದಕ್ಕೆ ಹಣ ನೀಡಲಾಗುತ್ತದೆ. ಬಿಪಿಎಲ್ ಕಾರ್ಡಿನಲ್ಲಿ ಎಷ್ಟು ಜನರಿರುತ್ತಾರೊ ಅವರಿಗೆಲ್ಲ ಪ್ರತಿಯೊಬ್ಬರಿಗೂ 170 ರೂ ನೀಡಲಾಗುತ್ತದೆ. ಅಕ್ಕಿ ಸಿಗುವ ತನಕವೂ ಇದು ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡುದಾರರಿಗೆ 10ಕೆಜಿ ಅಕ್ಕಿ ಕೊಡುತ್ತೇವೆ ಎಂದು ನಾವು ಮಾತು ಕೊಟ್ಟಿದ್ದೇವೆ. ಈ ಕುರಿತು ಕೇಂದ್ರದ ಬಳಿ ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ, ನಿಮ್ಮಲ್ಲಿ ದಾಸ್ತಾನಿಗೆ ಎಂದು ಕೇಳಿಕೊಂಡೆವು. ಆದರೆ ಕೇಂದ್ರ ಸರ್ಕಾರ ಅಕ್ಕಿ ಕೊಡದೇ ರಾಜಕೀಯ ಮಾಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ,ಸಿಎಂ ಸಿದ್ದರಾಮಯ್ಯನವರು ಮಾತನಾಡಿ, ನಮ್ಮ ಯೋಜನೆಗೆ ಅಕ್ಕಿ ಕೊಡುವುದಾಗಿ ಎಫ್‌ಸಿಐ ಒಪ್ಪಿಕೊಂಡು ಪತ್ರ ಕೊಟ್ಟಿತ್ತು. ಆದರೆ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣಕ್ಕೆ ಸಿಲುಕಿ ಅಕ್ಕಿ ಕೊಡುತ್ತಿಲ್ಲ. ಹಾಗಾಗಿ ನಾವು ಕೊಟ್ಟ ಮಾತಿನಂತೆ ಜುಲೈ ತಿಂಗಳಿನಿಂದಲೇ ಅನ್ನಭಾಗ್ಯ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಅಕ್ಕಿ ದಾಸ್ತಾನು ಅಗುವವರೆಗೂ ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ನೀಡುವ ಯೋಜನೆ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.

Post a Comment

0Comments
Post a Comment (0)