ಮೈಸೂರು: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದ್ದು, ತಾಂತ್ರಿಕವಾಗಿ ರಸ್ತೆಯಲ್ಲಿ ತೊಡಕಿರಬಹುದು ಹಾಗಾಗಿ ನಮ್ಮ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಲೋಕೋಪತೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆ ತಾಂತ್ರಕಿವಾಗಿ ತೊಂದರೆಯಲ್ಲಿದೆ. ಹಾಗಾಗಿ ಬಹಳಷ್ಟು ಅಪಘಾತಗಳು ಸಂಭವಿಸುತ್ಯಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ನಾವು ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಈಗಾಗಲೇ ಮೂರು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದೇವೆ. ಶಕ್ತಿ ಯೋಜನೆ ಜಾರಿಯಾಗಿದೆ. ಗೃಹಲಕ್ಷ್ಮಿ ಆಗಸ್ಟ್ 15 ರಂದು ಜಾರಿಗೆ ಬರಲಿದೆ. ಅಕ್ಕಿ ನೀಡುವಲ್ಲಿ ಸ್ವಲ್ಪ ವಿಳಂಭವಾದರೂ ಅದನ್ನೂ ಜಾರಿ ಮಾಡುತ್ತೇವೆ ಎಂದು ಹೇಳಿದರು.
ಈಗಾಗಲೆ ಐದು ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ ಐದು ಕೆ.ಜಿ.ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಎಲ್ಲಿಂದ ಅಕ್ಕಿ ತರಿಸಿಕೊಳ್ಳಬೇಕು ಹೇಗೆ ಮಾಡಬೇಕು ಎಂದು ಆಹಾರ ಸಚಿವರು ತಿಳಿಸಿದ್ದಾರೆ.ವಿಳಂಭವಾದರೂ ನಮ್ಮ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಹದಗಟ್ಟಿರುವ ರಸ್ತೆಯನ್ನು ಮೂರು ಹಂತದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅದನ್ನು ಪರಿಶೀಲಿಸಿ ಕಾಮಗಾರಿ ಆರಂಭಿಸುತ್ತೇವೆ ಎಂದರು.
ಸಾಹಿತಿ ದೇವನೂರ ಮಹದೇವ ಅವರು ಹಿರಿಯ ಸಾಹಿತಿಗಳು, ಸ್ವಾಭಾವಿಕವಾಗಿ ಅವರನ್ನು ಭೇಟಿ ಮಾಡುತ್ತಿದ್ದೇನೆ.ನಾನು ಮೈಸೂರಿಗೆ ಬಂದಾಗಲೆಲ್ಲ ಅವರನ್ನು ಭೇಟಿ ಮಾಡುತ್ತಿದ್ದೆ. ಅದೇ ರೀತಿ ಇಂದು ಸಹ ಅವರನ್ಮು ಭೇಟಿ ಮಾಡುತ್ತಿದ್ದೇನೆ. ಅವರ ಹೋರಾಟ ಮತ್ತು ನಮ್ಮ ಹೋರಾಟ ಒಂದೇ ಆಗಿರುವುದರಿಂದ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.