ಮೈಸೂರು: ಮಹಿಳಾ ಕ್ರೀಡಾ ಪಟುಗಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತಗತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್‌ನನ್ನು ಬಂಧಿಸುವಂತೆ ಆಗ್ರಹಿಸಿ ಎಐಡಿವೈಒ ಸಂಘಟನೆ ಪದಾಧಿಕಾರಿಗಳು ಗರುವಾರ ನಗರ ಹಲವೆಡೆ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಟನೆಯ ಜಿಲ್ಲಾಧ್ಯಕ್ಷ ಟಿ.ಆರ್. ಸುನೀಲ್ ಮಾತನಾಡಿ, ಹಿಂದಿನ ಕಾಲದಲ್ಲಿ ಸ್ತ್ರಿಯರು ಮನೆಯಲ್ಲಿರುತ್ತಿದ್ದರು ಆದರೆ ಪ್ರಸ್ತುತ ದಿನಗಳಲ್ಲಿ ಸ್ತ್ರೀಯರು ಒಲಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್‌ಗಳಲ್ಲಿ ಚಿನ್ನದ ಪದಕಗಳನ್ನು ತಂದು ದೇಶದ ಗೌರವವನ್ನು ದೇಶದೆಲ್ಲಡೆ ಪಸರಿಸಿದ ಹೆಣ್ಣು ಮಕ್ಕಳಿಗೆ ಸಂಸದೆರೇ ಕಿರುಕುಳ ನೀಡುತ್ತಿರುವುದು ದುರಂತ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಲೈಂಗಿಕ ಕಿರುಕುಳ ನೀಡಿ ಮಹಿಳಾ ಕ್ರೀಡಾಪಟುಗಳ ಶಕ್ತಿಯನ್ನು ಕುಂದಿಸುತ್ತಿರುವುದು ದೇಶದ ಅಭಿವೃದ್ಧಿಗೆ ಮಾರಕ. ಕಿರುಕುಳಕ್ಕೊಳಗಾದ ಹೆಣ್ಣು ಮಕ್ಕಳು ತಮಗಾದ ಲೈಂಗಿಕ ಕಿರುಕುಳದ ವಿರುದ್ಧ ದೇಶದ ರಾಜಧಾನಿಯಲ್ಲಿ ಬೀದಿಗಿಳಿದು ಪ್ರತಿಭಟಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಭಾರತೀಯ ಕುಸ್ತಿ ಪಟುಗಳ ಸಂಘದ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಕುಸ್ತಿ ತರಬೇತುದಾರನೊಬ್ಬ ಈ ಹಿಂದೆ ಬಾಲಕಿಯೂ ಸೇರಿದಂತೆ ಹಲವು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊರಬಂದಿದೆ. ಈ ಹೆಣ್ಣು ಮಕ್ಕಳು ಹಲವಾರು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಲಿಲ್ಲ. ಇದರಿಂದ ಬೇಸತ್ತ ಕುಸ್ತಿಪಟುಗಳು ಕಳೆದ ಜನವರಿಯಲ್ಲಿ ಕ್ರೀಡಾ ಸಚಿವಾಲಯದ ಮುಂದೆ ಅಹೋರಾತ್ರಿ ಧರಣಿಯನ್ನು ಆರಂಭಿಸಿ, 3 ದಿನಗಳ ಕಾಲ ನಡೆದ ಧರಣಿಯ ಪರಿಣಾಮವಾಗಿ ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಯಿತು. ತಮ್ಮ ಹೋರಾಟಕ್ಕೆ ನ್ಯಾಯ ಸಿಗಬಹುದೆಂದು ಕುಸ್ತಿ ಪಟುಗಳು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು ಎಂದು ತಿಳಿಸಿದರು.
ಮೇರಿ ಕೋಮ್ ಸಮಿತಿಯು ಈ ಕುರಿತು ತನಿಖೆ ನಡೆಸಿ ವರದಿಯನ್ನು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಿತು. ಆದರೆ ಸಚಿವಾಲಯವು ವರದಿಯನ್ನು ಬಹಿರಂಗಪಡಿಸಲಿಲ್ಲ. ಬದಲಿಗೆ ಈ ವರದಿಯಲ್ಲಿ ಲೈಂಗಿಕ ಕಿರುಕುಳ ನಡೆದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ದೂರನ್ನು ವಜಾಗೊಳಿಸಿದೆ. ಇದರಿಂದ ನೊಂದ ಕುಸ್ತಿಪಟುಗಳು ಮತ್ತೊಮ್ಮೆ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಆರಂಭಿಸಿದರು. ಜೊತೆಗೆ ಇಡೀ ದೇಶದ ಸಾರ್ವಜನಿಕರಲ್ಲಿ ಮನವಿ ಮಾಡಿ ನಮ್ಮ ಹೋರಾಟವನ್ನು ಬೆಂಬಲಿಸುವಂತೆ ಆಗ್ರಹಿಸಿದರು. ದೇಶದ ವಿವಿಧ ಗಣ್ಯರು, ಹೋರಾಟಗಾರರು, ಸಂಘ-ಸಂಸ್ಥೆಗಳು ಈ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಸಂಘಟನೆಯು ಅವರ ಬೆಂಬಲಕ್ಕೆ ನಿಂತಿದೆ ಎಂದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ನಿರಂಜನ್ ಹಿರೇಮಠ್, ಜಂಟಿ ಕಾರ್ಯದರ್ಶಿ ನೀತುಶ್ರೀ ಸೇರಿದಂತೆ ಇತರರು ಇದ್ದರು.