ವಿದ್ಯಾರ್ಥಿಗಳ‌ ಬದುಕಿಗೆ ಪೂರಕವಾದ ಶಿಕ್ಷಣ ನೀಡಿ: ನಟೇಶ್

ManjuHamapura
0
ಮೈಸೂರು: ಶಾಲೆ, ಕಾಲೇಜುಗಳು ಮಾನವನ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದ ನನಗೆ ಶಿಕ್ಷಣದ ಋಣಭಾರ ದೊಡ್ಡದಾಗಿದೆ. ಇದನ್ನು ಅರ್ಥಮಾಡಿಕೊಂಡು ಸಮಾಜಕ್ಕಾಗಿ ದುಡಿಯಬೇಕು. ಬದುಕನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು. ಇದುವೇ ಋಣಸಂದಾಯದ ಮಾರ್ಗ ಎಂದು ವಿಧಾನಸೌಧ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ ಡಾ.ಡಿ.ಬಿ.ನಟೇಶ್ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜಿನಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಮಪೂಜ್ಯರ ಆಶೋತ್ತರಗಳಂತೆ ಕಾಲೇಜು ಔನ್ನತ್ಯ ಪಡೆದು ಸಾಧನೆಯ ಪಥದಲ್ಲಿದೆ. ಪ್ರಚಲಿತ ಬದುಕಿಗೆ ಪೂರಕವಾದ ಶಿಕ್ಷಣ ಈ ಕಾಲೇಜಿನಲ್ಲಿ ಸಿಗುತ್ತಿರುವುದು ಸಂತೋಷದ ಸಂಗತಿ. ಕೇವಲ ಶಿಕ್ಷಣವಲ್ಲದೆ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿರುವುದು ಇನ್ನೂ ಸಂತಸದ ಸಂಗತಿ. ಇಲ್ಲಿ ಶಿಕ್ಷಣ ಪಡೆದ ಹೆಮ್ಮೆ ನನಗೆ ಸದಾ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಮೈಸೂರು ವಿವಿಯ ಗಣಕಯಂತ್ರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಗುರು ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಶಿಕ್ಷಣ ಪಡೆಯಲು ಬಂದ ನನಗೆ ಅಮ್ಮನಂತೆ ತಬ್ಬಿದ್ದು ಈ ಜೆಎಸ್‌ಎಸ್ ಕಾಲೇಜು. ಈ ಕಾಲೇಜು ಹಲವಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕನ್ನು ದೊಡ್ಡ ಮಟ್ಟದಲ್ಲಿ ರೂಪಿಸಿದೆ. ಇಂದಿಗೂ ಈ ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗುತ್ತಿದೆ. ಅತ್ಯುತ್ತಮ ಪ್ರಾಧ್ಯಾಪಕರುಗಳನ್ನು ನೀಡಿದ ಹೆಗ್ಗಳಿಕೆ ಈ ಕಾಲೇಜಿನದು ಎಂದರು.

ಮುಖ್ಯ ಅತಿಥಿ ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ನಿರ್ವಹಣಾ ವಿಭಾಗದ ಪ್ರಾಧ್ಯಾಪಕಿ ಪ್ರೊ.ನೂರ್ ಅಫ್ಜ ಮಾತನಾಡಿ, ಮುಸ್ಲಿಂ ಸಮುದಾಯದಿಂದ ಬಂದ ನನಗೆ ಶಿಕ್ಷಣ ಸಿಗುವುದೇ ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಈ ಕಾಲೇಜಿಗೆ ನನ್ನ ಅಮ್ಮ ಶಿಕ್ಷಣ ಪಡೆಯಲು ಸೇರಿಸಿದರು. ಇಲ್ಲಿನ ಅಚ್ಚುಕಟ್ಟಾದ ಶಿಕ್ಷಣ ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದ್ದರಿಂದ ಇಂದು ಸಮಾಜದಲ್ಲಿ ಪ್ರಾಧ್ಯಾಪಕಿಯಾಗಿದ್ದೇನೆ. ಇಲ್ಲಿನ ಶಿಕ್ಷಕ ವರ್ಗ ನನಗೆ ಅಂದು ನೀಡಿದ ನೈತಿಕ ಬೆಂಬಲ, ಮಾರ್ಗದರ್ಶನ ಯಾವುದನ್ನು ನನ್ನ ಜೀವನದಲ್ಲಿ ಮರೆಯಲಾಗದು ಎಂದರು.

ಮೈಸೂರಿನ ಸೇಫ್ ವೀಲ್ಸ್ ಗ್ರೂಪ್, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್ ಮಾತನಾಡಿ, ಈ ಕಾಲೇಜು ನಮಗೆ ದೇಗುಲವಿದ್ದಂತೆ. ಇಲ್ಲಿ ನಾವು ಹಲವು ರೀತಿಗಳಲ್ಲಿ ಪಡೆದ ತರಬೇತಿ ಇಂದು ನಮ್ಮನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದ ಮಾನವರನ್ನಾಗಿ ರೂಪಿಸಿದೆ ಎಂದು ಹೇಳಿದರು.

ಮೈಸೂರಿನ ಇಫೀಮೆಡ್ ಫಾರ್ಮಸ್ಯೂಟಿಕಲ್ಸ್ ಪ್ರೈವೇಟ್‌ ಲಿಮಿಟಿಡ್‌ನ ವ್ಯವಸ್ಥಾಪಕ ನಿದೇರ್ಶಕ ಎ.ಸುಧೀಂದ್ರ ಮಾತನಾಡಿ, ಈ ಕಾಲೇಜಿನಲ್ಲಿ ನಾವು ಶಿಸ್ತುಬದ್ಧ ಶಿಕ್ಷಣ, ತರಬೇತಿ ಪಡೆದ ಪರಿಣಾಮವಾಗಿ ಇಂದು ಹೊರ ಪ್ರಪಂಚದಲ್ಲಿ ಯಶಸ್ಸನ್ನು ಸಾಧಿಸಿದ್ದೇವೆ. ಈ ಕಾಲೇಜು ಕೇವಲ ಸಾಂಪ್ರದಾಯಿಕ ಶಿಕ್ಷಣ ನೀಡದೆ, ಕೌಶಲಯುತ ಶಿಕ್ಷಣ ನೀಡುತ್ತಾ ಬಂದಿದೆ. ಅದರ ಫಲವೇ ನಾವು ಇಂದು ವ್ಯವಹಾರಿಕ ಕೌಶಲ್ಯ ಪಡೆದುಕೊಂಡಿದ್ದೇವೆ ಎಂದರು.

ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ಪುಟ್ಟರಾಜಪ್ಪ ಮಾತನಾಡಿ, ಈ ಕಾಲೇಜಿನ ಕೊಡುಗೆ ಅಪಾರ. ಈ ಕಾಲೇಜು ಹಲವಾರು ಸಾಧಕರನ್ನು ಸಮಾಜಕ್ಕೆ ನೀಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಜೆಎಸ್‌ಎಸ್ ಮಹಾವಿದ್ಯಾಪೀಠ ಸ್ಥಾಪಿಸಿದ ಮೊದಲ ಕಾಲೇಜು ಇದು. ಇಂದು ಈ ಕಾಲೇಜು ಹಲವಾರು ಸಾಧನೆಗಳ ಮೈಲಗಲ್ಲುಗಳನ್ನು ನಿರ್ಮಿಸಿದೆ. ರಾಷ್ಟçದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಇದರಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರವೂ ಇದೆ. ಮುಂದೆಯೂ ಇವರ ಸಹಕಾರ ಇರಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್ ಸೇರಿದಂತೆ ಹಲವರು ಇದ್ದರು.

Post a Comment

0Comments
Post a Comment (0)