ಮೈಸೂರಿನ ಕಬಿನಿ ನೀರೆತ್ತುವ ಘಟಕವನ್ನು ಶಾಸಕ ಟಿ.ಎಸ್ ಶ್ರೀವತ್ಸ ಸೋಮವಾರ ಪರಿಶೀಲನೆ ಮಾಡಿದರು.
ಮೈಸೂರು: ಕಬಿನಿ ನೀರೆತ್ತುವ ಸ್ಟೇಷನ್, ವಿತರಣಾ ಜಾಲದ ಘಟಕಕ್ಕೆ ಶಾಸಕ ಟಿ.ಎಸ್ ಶ್ರೀವತ್ಸ ಭೇಟಿನೀಡಿದರು.ಇದೇ ವೇಳ ನಗರಕ್ಕೆ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಅಧಿಕಾರಿಗಳು ಜಲಾಶಯದಿಂದ ಪ್ರಸ್ತುತ ೬೦ ಎಂಎಲ್‌ಡಿ ನೀರು ಪಂಪ್ ಮಾಡುತ್ತಿದ್ದು, ವಿತರಣೆಯಲ್ಲಿ ಸ್ವಲ್ಪ ತೊಂದರೆಯಾಗಿದೆ ಎಂದು ಶಾಸಕರಿಗೆ ತಿಳಿಸಿದರು.
ಕಬಿನಿ ನದಿಯಿಂದ ೧೨೦ ಎಂಎಲ್‌ಡಿ ನೀರು ಸರಬರಾಜು ಮಾಡಬೇಕಿದೆ. ಶೀಘ್ರದಲ್ಲೇ ಪೈಪ್‌ಲೈನ್ ಕಾಮಗಾರಿ ಮುಗಿದರೆ ಯಾವ ಸಮಸ್ಯೆ ಇಲ್ಲವೆಂದು ಹೇಳಿದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಸಮಸ್ಯೆ ಆಲಿಸಿ ಶಾಸಕ ಶ್ರೀವತ್ಸ ಮಾತನಾಡಿ, ಕ್ಷೇತ್ರದ ಹಲವಾರು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿದೆ. ಕಬಿನಿ ಮತ್ತು ಕೆಆರ್‌ಎಸ್‌ನಿಂದ ಯಾವ್ಯಾವ ಬಡಾವಣೆಗಳಿಗೆ ನೀರು ಪೂರೈಕೆಯಾಗುತ್ತಿದೆ, ಹಲವೆಡೆ ಸಮಸ್ಯೆ ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.
ಮಹಾಪೌರ ಶಿವಕುಮಾರ್, ಉಪ ಮಹಾಪೌರರಾದ ಡಾ.ಎಂ.ರೂಪಾ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಅಧೀಕ್ಷಕ ಅಭಿಯಂತರ ಎಸ್.ಮಹೇಶ್,ವಾಣಿ ವಿಲಾಸ ಕುಡಿಯುವ ನೀರು ಸರಬರಾಜು ಕೇಂದ್ರದ ಕಾರ್ಯಪಾಲಕ ಇಂಜಿನಿಯರ್ ಸುವರ್ಣ ಸೇರಿದಂತೆ ಇತರರು ಇದ್ದರು.