ಸೌಜನ್ಯ ಕೊಲೆಃ :ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ

ManjuHamapura
0
ಮೈಸೂರು: ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತ ಬಾಲಕಿ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬಹೃತ್ ಪ್ರತಿಭಟನೆ ನಡೆಸಲಾಯಿತು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು, ಹೋರಾಟಗಾರರು, ಪ್ರಗತಿಪರರು ನೊಂದ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿದರು. ಮರು ತನಿಖೆಗೆ ಆಗ್ರಹಿಸುವ ಪ್ಲೇ ಕಾರ್ಡ್ಗಳನ್ನು ಪ್ರದರ್ಶಿಸಿ ಧಿಕ್ಕಾರ ಕೂಗಿದರು. ವಿನೋಬಾ ರಸ್ತೆ ಮಾರ್ಗವಾಗಿ ಸಾಗಿದ ಪ್ರತಿಭಟನೆ ರ‍್ಯಾಲಿ ವೇಳೆ ಬಾಲಕಿ ಸೌಜನ್ಯಳಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಸಂಚಾರಕ್ಕೆ ಅಡಚಣೆಯಾದ್ದರಿಂದ ಪೊಲೀಸರು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಸೌಜನ್ಯ ಪೋಷಕರು, ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾದ ಸಂತೋಷ್ ರಾವ್ ಕುಟುಂಬದವರು ನೆರೆದಿದ್ದ ಪ್ರತಿಭಟನಾಕಾರರಲ್ಲಿ ನ್ಯಾಯಕ್ಕಾಗಿ ಅಂಗಲಾಚಿದರು. ಹೋರಾಟಗಾರ್ತಿ, ವಿಶ್ರಾಂತ ಕುಲಪತಿ ಡಾ.ಸಬೀಹಾ ಭೂಮಿಗೌಡ ಮಾತನಾಡಿ, ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರೆಯುವ ತನಕ ತಮ್ಮ ಪ್ರತಿರೋಧ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ದಸಂಸ ಮುಖಂಡ ಬೆಟ್ಟಯ್ಯ ಕೋಟೆ ಮಾತನಾಡಿ, ಧರ್ಮಸ್ಥಳದಲ್ಲಿ 467 ಅಸಹಜ ಸಾವುಗಳಾಗಿವೆ. ಧರ್ಮಸ್ಥಳ ಧರ್ಮದ ಕೇಂದ್ರವಾಗಿ ಉಳಿಯಬೇಕಾದರೆ ಈ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪೊಲೀಸರು ನಿರಪರಾಧಿಗಳನ್ನು ಆರೋಪಿ ಮಾಡಿ ನಿಜವಾದ ಅರೋಪಿಗಳನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.

ಒಡನಾಡಿ ವಿದ್ಯಾರ್ಥಿ ನೇತ್ರಾವತಿ ಮಾತನಾಡಿ, ಅತ್ಯಾಚಾರ, ಕೊಲೆ ಆರೋಪಿ ನಿರ್ದೋಷಿಯಾದರೆ ಕೊಲೆ ಮಾಡಿದವರು ಯಾರು? ನಮ್ಮ ಈ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು. 

ಸೌಜನ್ಯ ತಾಯಿ ಕುಸುಮಾದೇವಿ ಮಾತನಾಡಿ, 11 ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇಷ್ಟು ವರ್ಷಗಳು ನಾವು ಪಟ್ಟ ನೋವು ಮತ್ತೊಬ್ಬರಿಗೆ ಬರಬಾರದು. ಜನರು ಹೋರಾಟದ ಮೂಲಕ ನಮಗೇ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಂಜಯ್ ರಾವ್ ಮಾತನಾಡಿ, ದೇವಸ್ಥಾನಕ್ಕೆ ಹೋದ ನನ್ನ ತಮ್ಮ ಸಂತೋಷ್ ರಾವ್‌ನನ್ನು ಆರೋಪಿ ಮಾಡಿದರು. ಯಾವ ತಪುö್ಪ ಮಾಡದ ಆತ 6 ವರ್ಷ ಜೈಲು ಶಿಕ್ಷೆ ಅನುಭವಿಸಿದ. ಈಗ ನಿರಪರಾಧಿಯಾಗಿ ಹೊರಗೆ ಬಂದಿದ್ದಾನೆ. ನಮಗಾದ ಅನ್ಯಾಯಕ್ಕೆ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದರು. 

ಒಡನಾಡಿ ಸ್ಟಾನ್ಲಿ ಮಾತನಾಡಿ, ಕಾನೂನಿಗೆ ಗೋರಿ ಕಟ್ಟಿದ್ದರಿಂದ ಸೌಜನ್ಯ ಮತ್ತು ಸಂತೋಷ್ ರಾವ್ ಮನೆಗಳು ಸ್ಮಶಾನದಂತಾಗಿವೆ. ಈ ಪ್ರಕರಣದಲ್ಲಿ ಭಾಗಿದಾರರಾದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳು ಸೌಜನ್ಯ ಮನೆಗೆ ಭೇಟಿ ಕೊಡಬೇಕು ಎಂದು ಒತ್ತಾಯಿಸಿದರು. 
ಹೋರಾಟಗಾರ್ತಿ ಸೀಮಾ ಮಾತನಾಡಿ, ತ್ವರಿತಗತಿಯಲ್ಲಿ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು. ಇವತ್ತಿಗೂ ಹೆಣ್ಣು ಮಕ್ಕಳು ಅಭದ್ರತೆಯಲ್ಲಿ ಬದುಕುವಂತಾಗಿದೆ. ಸೂಕ್ತ ಭದ್ರತೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿ.ಪಿ.ಬಸವರಾಜು, ಎಚ್.ಜನಾರ್ಧನ್, ಪ್ರೊ.ಕಾಳಚನ್ನೇಗೌಡ, ನಾ.ದಿವಾಕರ, ಅಹಿಂದ ಜವರಪ್ಪ, ಆಲಗೂಡು ಶಿವಕುಮಾರ್, ಶಂಭುಲಿAಗಸ್ವಾಮಿ, ರಂಗಕರ್ಮಿಗಳಾದ ಮೈಮ್ ರಮೇಶ್, ಒಡನಾಡಿಯ ಪರಶು, ಸ.ರ.ಸುದರ್ಶನ, ಸಿ.ಬಸವಲಿಂಗಯ್ಯ, ರತಿರಾವ್, ಪ್ರೊ.ಪಂಡಿತರಾಧ್ಯ, ಚ.ಸರ್ವಮಂಗಳ, ಕೆ.ಆರ್.ಸುಮತಿ, ಕೆ.ಆರ್.ಗೋಪಾಲಕೃಷ್ಣ, ಉಗ್ರನರಸಿಂಹೇಗೌಡ, ಸರಸ್ವತಿ, ಕಲ್ಲಹಳ್ಳಿ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು

Post a Comment

0Comments
Post a Comment (0)