ಎಲ್ಲಾ ನಿರುದ್ಯೋಗಿಗಳಿಗೂ ಯವನಿಧಿ ವಿಸ್ತರಿಸಿ: ಎಐಡಿವೈಒ

ManjuHamapura
0
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು ಹಲವು ವರ್ಷಗಳಿಂದ ನಿರುದ್ಯೋಗ ಸಮಸ್ಯೆಯಿಂದ ಪರಿತಪಿಸುತ್ತಿರುವ ಎಲ್ಲ ನಿರುದ್ಯೋಗಿ ಯುವಕರಿಗೂ ವಿಸ್ತರಿಸಬೇಕು ಎಂದು ಎಐಡಿವೈಒ (ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ) ಮನವಿ ಮಾಡಿದೆ.

ಎಐಡಿವೈಒ 58ನೇ ಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಸಂಘಟನೆಯ ರಾಜ್ಯ ಸಮಿತಿಯ ನಿಯೋಗವು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿರುದ್ಯೋಗಿ ಯುವಕರ ಸಮಸ್ಯೆ ಕುರಿತು ಚರ್ಚಿಸಲಾಯಿತು.

ನೇಮಕಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆ ಬರೆಯಲು ಹೋಗುವ ನಿರುದ್ಯೋಗಿ ಯುವಕರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ನೇಮಕಾತಿಯಲ್ಲಿನ ಭ್ರಷ್ಟಾಚಾರ ತಡೆ ಹಾಗೂ ಯುವಜನರನ್ನು ದಾರಿ ತಪ್ಪಿಸುವ ವಿಚ್ಚಿದ್ರಾಕರಿ ಶಕ್ತಿಗಳನ್ನು ಮಟ್ಟಹಾಕಬೇಕು” ಎಂದು ನಿಯೋಗ ಕೋರಿತು.

ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಐದು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ 1,000 ರೂ. ದುಬಾರಿ ಅರ್ಜಿ ಶುಲ್ಕ ನಿಗದಿ ಮಾಡಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅದನ್ನು ವಾಪಸ್ಸು ಪಡೆಯುವಂತೆ ಮನವಿ ಸಲ್ಲಿಸಲಾಯಿತು.

ಹಾಗೆಯೇ ದ್ವೇಷದ ರಾಜಕಾರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನೇಮಕಾತಿಗಾಗಿ ಎಲ್ಲ ತರಹದ ಅರ್ಜಿ ಶುಲ್ಕಗಳನ್ನು ಕೈಬಿಡಬೇಕು. ಯುವಜನತೆಯ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾದ ಮಾಧ್ಯಮಗಳಲ್ಲಿನ ಅಶ್ಲೀಲತೆ, ಮದ್ಯ ಮಾದಕ ವಸ್ತುಗಳಿಗೆ ಕಡಿವಾಣ ಹಾಕಬೇಕು  ಎಂಬ ಅನೇಕ ಬೇಡಿಕೆಗಳ ಅಗ್ರಹ ಪತ್ರವನ್ನು‌ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಇವೇ ವೇಳೆ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಉಪಾಧ್ಯಕ್ಷರಾದ ಕೃಷ್ಣ, ರಾಜ್ಯ ಖಜಾಂಚಿ ಜಯಣ್ಣ, ರಾಜ್ಯ ಸಮಿತಿ ಸದಸ್ಯರಾದ ರಾಜಶೇಖರ, ಪೂರ್ಣಿಮ ಹಾಗೂ ಸದಸ್ಯರಾದ ಅರುಣಕುಮಾರ್ ಇದ್ದರು.

Post a Comment

0Comments
Post a Comment (0)